ಕೆಲರ್, ಗಾಟ್‍ಫ್ರೀಟ್
1819-1890 ಸ್ವಿಟ್ಜರ್‍ಲೆಂಡಿನ ಕವಿ ಮತ್ತು ಕಾದಂಬರಿಕಾರ. ಜರ್ಮನ್ ಭಾಷೆಯ ಪ್ರಖ್ಯಾತ ಗದ್ಯ ಬರೆಹಗಾರರಲ್ಲಿ ಒಬ್ಬ. ಜೂóರಿಕ್‍ನಲ್ಲಿ ಹುಟ್ಟಿದ. ಮೂನಿಕ್ನಲ್ಲಿ ಎರಡು ವರ್ಷ ಕಲಾಭ್ಯಾಸದಲ್ಲಿ ನಿರತವಾದ. ಆದರೆ ಸಾಹಿತ್ಯ ತನ್ನ ಜಾಯಮಾನಕ್ಕೆ ಅಂಟಿದ್ದೆಂದು ಕಂಡುಕೊಂಡು ಬಹುಬೇಗ ಸಾಹಿತ್ಯಸೃಷ್ಟಿಗೆ ತೊಡಗಿದ. 1850 ರಿಂದ ಐದು ವರ್ಷ ಬರ್ಲಿನಿನಲ್ಲಿ ವಾಸಿಸಿದ. 1861 ರಿಂದ ಸುಮಾರು 15 ವರ್ಷಗಳ ಕಾಲ ತನ್ನ ಊರಿನ ಒಂದು ಸಣ್ಣ ಪ್ರದೇಶದ ಕಾರ್ಯದರ್ಶಿ ಕೆಲಸವನ್ನು ನಿರ್ವಹಿಸಿದ. 1846ರಲ್ಲಿ ಪ್ರಕಟವಾದ ಗೆಡಿಚೆ ಎಂಬ ಕವನ ಸಂಕಲನ ಈತನಲ್ಲಿ ಸುಪ್ತವಾಗಿದ್ದ ಸಾಹಿತ್ಯಸೃಷ್ಟಿಯನ್ನು ಶ್ರುತಪಡಿಸಿತು. 1851-53ರಲ್ಲಿ ನಾಲ್ಕು ಸಂಪುಟಗಳಲ್ಲಿ ಪ್ರಕಟಗೊಂಡ ಈತನ ಡರ್ ಗ್ರುನೆ ಹೆನ್ರಿ (ಹಸಿರು ಹೆನ್ರಿ) ಕಾದಂಬರಿ ಈತನಿಗೆ ಯಶಸ್ಸುತಂದ ಪುಸ್ತಕ. ಪ್ರಧಾನವಾಗಿ ಇದು ಆತ್ಮಕಥೆ. ಇದರಲ್ಲಿ ಕೆಲರ್ ತನ್ನ ಕಲ್ಪನಾಶಕ್ತಿ, ಸೌಂದರ್ಯಪ್ರಜ್ಞೆ, ಸತ್ಯನಿಷ್ಠೆಗಳನ್ನು ತೋರಿದ್ದಾನೆ. ನೀಳ್ಗತೆಗಳ ಸಂಕಲನವೊಂದು ಇಂಗ್ಲಿಷ್ ಭಾಷೆಗೆ ಅನುವಾದಗೊಂಡಿದೆ.

ಮಾರ್ಟಿನ್ ಸಲಾಂದರ್ (1886) ಗ್ರಂಥದಲ್ಲಿ ಪ್ರಜಾತಂತ್ರ ಹಾಗೂ ಯೂರೋಪಿನ ಸಂಸ್ಕøತಿಗಳ ನಡುವಣ ತಿಕ್ಕಾಟವಿದೆ. 1882ರಲ್ಲಿ ಪ್ರಕಟಗೊಂಡ ಕಥೆಗಳು ಈತನ ಕಥನಕೌಶಲದ ಶ್ರೇಷ್ಠತೆಯನ್ನು ತೋರಿಸುತ್ತವೆ. ಈತನ ಕಥೆಗಳಲ್ಲಿ ಬರುವ ಮಧ್ಯಮ ವರ್ಗದವರ ಜೀವನ ಚಿತ್ರಣದಲ್ಲಿ ವಿಡಂಬನೆ, ಜೀವಂತವಾಗಿ ಮೂಡಿವೆ. ರಾಜಕೀಯ ಸ್ವಾತಂತ್ರ್ಯ ಮತ್ತು ಕ್ರೈಸ್ತಧರ್ಮದಲ್ಲಿ ಕಾಣುವ ಮಾನವೀಯತೆಗಳಿಂದ ಪ್ರೇರಿತನಾಗಿ, ಧರ್ಮಶ್ರದ್ಧೆಯೇ ಜೀವನದ ಪ್ರಾಯೋಗಿಕ ನೀತಿಯೆಂದು ಭಾವಿಸಿ. ಸತ್ತ್ವಯುತವಾದ ಬರವಣಿಗೆಯಿಂದ ಈತ ಜನಜೀವನವನ್ನು ಚಿತ್ರಿಸಿರುವುದರಿಂದ ಜರ್ಮನ್ ಸಾಹಿತ್ಯದಲ್ಲಿ ಈತನಿಗೊಂದು ವಿಶಿಷ್ಟಸ್ಥಾನ ಏರ್ಪಟ್ಟಿದೆ.
											
(ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ